ಶರಾವತಿ
	ಭಾರತದ ಕರ್ನಾಟಕ ರಾಜ್ಯದ ಶಿವಮೊಗ್ಗ ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ಹರಿಯುವ ಒಂದು ನದಿ. ತೀರ್ಥಹಳ್ಳಿಗೆ ವಾಯವ್ಯದಲ್ಲಿ ಸು. 16 ಕಿಮೀ ದೂರದಲ್ಲಿ ಕವಲೇದುರ್ಗದ ಬಳಿ ಇರುವ ಅಂಬುತೀರ್ಥದಲ್ಲಿ ಇದರ ಉಗಮ. ಉಗಮಸ್ಥಾನದಿಂದ ಸ್ವಲ್ಪದೂರ ವಾಯವ್ಯ ದಿಕ್ಕಿನತ್ತ ಹರಿಯುವ ಈ ನದಿಯನ್ನು ಪಟ್ಟಗುಪ್ಪೆಯ ಬಳಿ ಬಲಗಡೆಯಲ್ಲಿ ಹರಿದ್ರಾವತಿ ನದಿಯೂ ಬಾರಂಗಿ ಮೇಲುಗಡೆ ಎಡಭಾಗದಲ್ಲಿ ಎಣ್ಣೆಹೊಳೆಯೂ ಕೂಡಿಕೊಳ್ಳುತ್ತವೆ. ಇವಲ್ಲದೆ ಹುರ್ಳಿ ಹೊಳೆ, ಬಿರ್ದನ ಹೊಳೆ, ಶರ್ಮಣಾವತಿ, ದೂಳಿಮಕ್ಕಿ ಹೊಳೆ ಮುಂತಾದ ಸಣ್ಣಪುಟ್ಟ ತೊರೆಗಳನ್ನೂ ಕೂಡಿಕೊಂಡು ಹರಿಯುವ ಈ ನದಿ ಶಿವಮೊಗ್ಗ ಜಿಲ್ಲೆಯಲ್ಲಿ ಸು. 32 ಕಿಮೀ ದೂರ ಹರಿದು, ಜಿಲ್ಲೆಯ ಗಡಿಯಲ್ಲಿ ಪಶ್ಚಿಮಕ್ಕೆ ತಿರುಗಿ ಪಶ್ಚಿಮ ಘಟ್ಟದಿಂದ ಕೆಳಗೆ ಧುಮುಕಿ ಜೋಗ ಜಲಪಾತವನ್ನುಂಟುಮಾಡಿದೆ (ನೋಡಿ- ಗೇರುಸೊಪ್ಪೆ-ಜಲಪಾತ). ಮುಂದೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಹಿಸಿ ಹೊನ್ನಾವರದ ಬಳಿ ಅರಬ್ಬಿಸಮುದ್ರವನ್ನು ಸೇರುತ್ತದೆ.  ಈ ನದಿಯ ಒಟ್ಟು ಹರಿವಿನ ಉದ್ದ 128 ಕಿಮೀ.

	ಈ ನದಿ ಕರ್ನಾಟಕ ರಾಜ್ಯದ ಜಲವಿದ್ಯುತ್ ಪೂರೈಕೆಯಲ್ಲಿ ಮುಖ್ಯ ಸ್ಥಾನ ಪಡೆದಿದೆ. ಶರಾವತಿ ಜಲವಿದ್ಯುತ್ ಯೋಜನೆಯ ಪ್ರಕಾರ ಈ ನದಿಗೆ ಲಿಂಗನಮಕ್ಕಿ (ನೋಡಿ- ಲಿಂಗನಮಕ್ಕಿ) ಎಂಬಲ್ಲಿ ಅಣೆಕಟ್ಟನ್ನು ಕಟ್ಟಿ ಜಲವಿದ್ಯುದು ತ್ಪಾದನೆಗೆ ಬಳಸಿಕೊಳ್ಳಲಾಗುತ್ತಿದೆ.  ಮಹಾತ್ಮ ಗಾಂಧಿ ಜಲವಿದ್ಯುತ್ ಉತ್ಪಾದನಾ ಕೇಂದ್ರದಿಂದ 5 ಕಿಮೀ ದೂರದಲ್ಲಿರುವ ಆನೆಬೈಲು ವಿದ್ಯುತ್ ಉತ್ಪಾದನಾ ಕೇಂದ್ರ ಆಗ್ನೇಯ ಏಷ್ಯದಲ್ಲೇ ಅತಿ ದೊಡ್ಡದು.  ಲಿಂಗನಮಕ್ಕಿ ಅಣೆಕಟ್ಟಿನ ಬಳಿಯೂ ವಿದ್ಯುತ್ ಉತ್ಪಾದನಾ ಕೇಂದ್ರವೊಂದನ್ನು ನಿರ್ಮಿಸಲಾಗಿದೆ.  ಶಿವಮೊಗ್ಗ ಜಿಲ್ಲೆಯ ನೀರಾವರಿಗೂ ಈ ನದೀಜಲದ ಬಳಕೆಯುಂಟು. ಈ ನದಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಆರು ಫರ್ಲಾಂಗ್ ಉದ್ದದ ಸೇತುವೆ ಕಟ್ಟಿದ್ದು ಮಂಗಳೂರಿನಿಂದ ಮುಂಬಯಿ ವರೆಗಿನ ಕರಾವಳಿ ಮಾರ್ಗ ಈಗ ಹೆಚ್ಚು ಉಪಯುಕ್ತವಾದ ವ್ಯಾಪಾರದ ಅಭಿವೃದ್ಧಿಗೆ ಕಾರಣವಾಗಿದೆ.  ಹೊನ್ನಾವರದ ಬಳಿ ಈ ನದಿ ಸಮುದ್ರ ಸೇರುವ ತಾಣದಿಂದ ಸ್ಪಲ್ಪ ದೂರದವರೆಗೆ ಜಲ ಸಂಚಾರಕ್ಕೆ ಅನುಕೂಲವಾಗಿದ್ದು ಸರಕುಗಳ ಸಾಗಣೆ ನಡೆಯುವುದು.

	ಅರಣ್ಯವಾಸಕಾಲದಲ್ಲಿ ಶ್ರೀರಾಮಚಂದ್ರ ನೀರಿಗಾಗಿ ಅಂಬನ್ನು ನೆಲಕ್ಕೆ ಬಿಟ್ಟು ಜಲ ಉದ್ಭವಿಸುವಂತೆ ಮಾಡಿದನೆಂದೂ ಅದರಿಂದಲೇ ಅಂಬುತೀರ್ಥ ಎಂಬ ಹೆಸರೂ ಶರದಿಂದ ಜನಿಸಿದ್ದರಿಂದ ಈ ನದಿಗೆ ಶರಾವತಿಯೆಂಬ ಹೆಸರೂ ಬಂತೆಂದು ಪುರಾಣ ಕಥೆ.        			
							(ಡಿ.ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ